ಚಿಯಾಂಗ್ ಕೈ - ಷೆಕ್
1887-1975. ಚೀನೀ ಯೋಧ, ರಾಜಕಾರಣಿ; 1928 ರಿಂದ 1949ರ ವರೆಗೆ ಚೀನೀ ಸರ್ಕಾರದ ಮತ್ತು 1949ರಿಂದ ಫಾರ್ಮೋಸ ದ್ವೀಪದಲ್ಲಿ ದೇಶಭ್ರಷ್ಟ ಸರ್ಕಾರದ ಅಧ್ಯಕ್ಷ.

	ಜೆಜಿಯಾಂಗ್ ಪ್ರಾಂತ್ಯದ ಪೆಂಗ್ವಾ ಜಿಲ್ಲೆಯ ಚಿಕೋವ್ ಎಂಬ ಗ್ರಾಮದ ವರ್ತಕ ಕೃಷಿಕಾರ ಕುಟುಂಬವೊಂದರಲ್ಲಿ 1887ರ ಅಕ್ಟೋಬರ್ 31ರಂದು ಚಿಯಾಂಗ್ ಕೈ-ಷೆಕ್ ಜನಿಸಿದರು. 1906ರಲ್ಲಿ ಉತ್ತರ ಚೀನದ ಪೋಟಿಂಗ್ ಸೈನಿಕ ಅಕಾಡೆಮಿಯಲ್ಲೂ 1907-1911ರಲ್ಲಿ ಜಪಾನಿನ ಟೋಕಿಯೋ ಸೈನಿಕ ಕಾಲೇಜಿನಲ್ಲೂ ಶಿಕ್ಷಣ ಪಡೆದರು. 1909-1911 ರಲ್ಲಿ ಜಪಾನಿ ಸೈನ್ಯದಲ್ಲಿ ಕೆಲಸ ಮಾಡಿದರು. ಆಗ ಅವರ ಸಹಪಾಠಿಗಳಿಂದ ಪ್ರಭಾವಿತರಾದ ಚಿಯಾಂಗ್ ಕ್ರಾಂತಿಕಾರಿಯಾದರು. ಚೀನವನ್ನು ಮಂಚು ವಂಶದ ಆಡಳಿತದಿಂದ ವಿಮೋಚನೆಗೊಳಿಸುವ ಸಂಚಿನಲ್ಲಿ ಇವರೂ ಭಾಗವಹಿಸಿದರು. ಸುನ್ ಯಾಟ್-ಸೆನ್ನರ ವಿಚಾರಗಳಲ್ಲಿ ಇವರಿಗೆ ಆಸಕ್ತಿ ಮೂಡಿತು.

	1911ರಲ್ಲಿ ಚೀನದಲ್ಲಿ ಕ್ರಾಂತಿಕಾರಿ ಘಟನೆಗಳು ಸಂಭವಿಸಿದಾಗ ಚಿಯಾಂಗ್ ಸ್ವದೇಶಕ್ಕೆ ಹಿಂದಿರುಗಿ ಹೋರಾಟದಲ್ಲಿ ನೆರವಾದರು. ಮಂಚುಗಳ ಪತನವಾಯಿತಾದರೂ ಯುವಾನ್ ಷಿ-ಕೈ ಅಧ್ಯಕ್ಷರಾಗಿ, ನಿರಂಕುಶಾಧಿಪತಿಯಾಗಿ ಆಳತೊಡಗಿ, ತನ್ನನ್ನು ಅಧಿಕಾರಕ್ಕೆ ತಂದ ಪಕ್ಷವನ್ನೇ ನಾಶಗೊಳಿಸಲು ಯತ್ನಿಸಿದ. ಕ್ರಾಂತಿಕಾರರು ಅವನ ವಿರುದ್ಧ ಚಳವಳಿ ನಡೆಸಿ ವಿಫಲರಾದರು. ಚಿಯಾಂಗ್ ಜಪಾನಿಗೆ ಓಡಿಹೋಗಿ 1915 ರ ವರೆಗೂ ಅಲ್ಲೇ ಇದ್ದರು. ಯುವಾನ್ ತಾನೇ ಚಕ್ರವರ್ತಿಯಾಗಲು ಪ್ರಯತ್ನಿಸಿ ಜನವಿರೋಧವನ್ನು ಬೆಳೆಸಿಕೊಂಡ. ಮತ್ತೊಂದು ಕ್ರಾಂತಿಗೆ ಪರಿಸ್ಥಿತಿ ಹದವಾಗಿತ್ತು. ಅದರಲ್ಲಿ ಭಾಗವಹಿಸಲು ಚಿಯಾಂಗ್ ಸ್ವದೇಶಕ್ಕೆ ಹಿಂದಿರುಗಿದರು. ಕ್ರಾಂತಿ ಸಂಭವಿಸಿತು. ಗಣರಾಜ್ಯ ಉಳಿದುಕೊಂಡಿತು. ಯುವಾನನ ಆಶೆ ಮಣ್ಣುಗೂಡಿತು.

	ಚಿಯಾಂಗ್ ಕೈ-ಷೆಕ್ 1916-17ರಲ್ಲಿ ಷಾಂಗ್‍ಹೈನಲ್ಲಿ ಗ್ರೀನ್ ಗ್ಯಾಂಗ್ ಎಂಬ ಗುಪ್ತ ಸಂಘವೊಂದರಲ್ಲಿದ್ದರು. ಈ ಸಂಸ್ಥೆ ಹಣಕಾಸಿನ ಕೈವಾಡಗಳಲ್ಲಿ ನಿರತವಾಗಿತ್ತು. 1918ರಲ್ಲಿ ಚಿಯಾಂಗ್ ಮತ್ತೆ ಸಾರ್ವಜನಿಕ ರಂಗ ಪ್ರವೇಶಮಾಡಿದರು. ಕ್ವೋಮಿನ್ ಟಾಂಗ್‍ನ (ರಾಷ್ಟ್ರೀಯ ಪಕ್ಷ) ನಾಯಕ ಸುನ್ ಯಾಟ್-ಸೆನರ ಅನುಯಾಯಿಯಾದರು. ಯುವಾನನ ಅನಂತರ ಸೇನಾ ಸತ್ರಪರಲ್ಲಿ ಹರಿದು ಹಂಚಿಹೋಗಿದ್ದ ಚೀನವನ್ನು ಒಂದುಗೂಡಿಸಲು ಸುನ್ ಯಾಟ್-ಸೆನ್ ಪ್ರಯತ್ನಿಸುತ್ತಿದ್ದರು. ರಾಜ್ಯವನ್ನು ವಿಮೋಚನೆಗೊಳಿಸಿ, ಕ್ರಾಂತಿಯನ್ನು ಸಾರ್ಥಕಗೊಳಿಸುವುದು ಅವರ ಉದ್ದೇಶವಾಗಿತ್ತು. ಸುನ್ ಯಾಟ್-ಸೆನ್ ಸೈನ್ಯವನ್ನು ಕಟ್ಟಲು ಅವರಿಗೆ ಪರಕೀಯರ ಸಹಾಯ ಅವಶ್ಯವಾಗಿತ್ತು. ಅವರು ಸೋವಿಯೆತ್ ದೇಶದ ಸಹಾಯ ಕೋರಿದರು. ಸೋವಿಯೆತ್ ಸಂಘಸಂಸ್ಥೆಗಳನ್ನೂ ಅಲ್ಲಿಯ ಸೈನ್ಯಪದ್ಧತಿಯನ್ನೂ ಅಧ್ಯಯನ ಮಾಡಲು ಚಿಯಾಂಗ್ ರಷ್ಯಕ್ಕೆ ಭೇಟಿಯಿತ್ತರು. ಸೋವಿಯೆತ್ ಮಾದರಿಯಲ್ಲಿ, ಕ್ಯಾಂಟನ್ನಿನ ಹತ್ತಿರದ ವಾಂಪೋವದಲ್ಲಿ ಸೈನಿಕ ಅಕಾಡೆಮಿ ಸ್ಥಾಪಿತವಾಯಿತು. ಚಿಯಾಂಗರೇ ಅದಕ್ಕೆ ಅಧಿಪತಿ.

	ಸೋವಿಯೆತ್ ಸಲಹೆಗಾರರು ಕ್ಯಾಂಟನ್‍ಗೆ ಬಂದರು. ಚೀನೀ ಕಮ್ಯೂನಿಸ್ಟರಿಗೂ ಕ್ವೋಮಿನ್‍ಟಾಂಗ್ ಪಕ್ಷಕ್ಕೂ ಬಾಂಧವ್ಯ ಏರ್ಪಟ್ಟಿತ್ತು. ಚಿಯಾಂಗರು ಮಾಕ್ರ್ಸ್ ಮತ್ತು ಲೆನಿನರ ಕೃತಿಗಳ ಅಧ್ಯಯನ ಮಾಡಿದರು. ಲೆನಿನ್ ಸಿದ್ಧಾಂತಗಳು ಅವರ ಮೇಲೆ ಪ್ರಭಾವ ಬೀರಿದುವು. ಸುನ್ ಯಾಟ್-ಸೆನ್ನರ ಮರಣಾನಂತರ (1925) ಅಧಿಕಾರಕ್ಕಾಗಿ ಚೀನೀ ಕಮ್ಯೂನಿಸ್ಟರಿಗೂ ಚಿಯಾಂಗರಿಗೂ ಸ್ಪರ್ಧೆ ಏರ್ಪಟ್ಟಿತು. ವಾಂಪೋವ ಸೈನ್ಯಪಡೆಯ ಸಹಾಯದಿಂದ ಚಿಯಾಂಗ್ ಅವರನ್ನು ಎದುರಿಸಿದರು. ಶಕ್ತಿಪ್ರದರ್ಶನ ಹಾಗೂ ಸೌಮ್ಯನೀತಿಗಳನ್ನು ಒಂದೊಂದಾಗಿ ಪ್ರದರ್ಶಿಸಿ, ಸೋವಿಯೆತರ ಸಹಾಯವನ್ನು ಕಳೆದುಕೊಳ್ಳದೆ ಕಮ್ಯೂನಿಸ್ಟರನ್ನು ವಿರೋಧಿಸಿದರು. 1927ರ ವರೆಗೂ ಸೋವಿಯೆತ್ ದೇಶದ ಸಹಾಯ ಅವರಿಗೆ ದೊರಕುತ್ತಿತ್ತು. 1927ರಲ್ಲಿ ಕ್ಷಿಪ್ರಾಕ್ರಮಣ ನಡೆಸಿ ಚಿಯಾಂಗ್ ಅಧಿಕಾರ ಪಡೆದುಕೊಂಡರು. ಕಮ್ಯೂನಿಸ್ಟರೊಂದಿಗಿನ ಸಂಬಂಧ ಕೊನೆಗೊಂಡಿತು. ಕ್ರಾಂತಿ ಸೇನೆಯ ದಂಡಾಧಿಕಾರಿಯಾಗಿ ಅವರು ಯುದ್ಧನಾಯಕರೊಂದಿಗೆ ನಡೆಸುತ್ತಿದ್ದ ಯುದ್ಧ 1928ರಲ್ಲಿ ಕೊನೆಗೊಂಡಿತು. ಆ ವರ್ಷ ಅವರು ಪೀಕಿಂಗನ್ನು ಪ್ರವೇಶಿಸಿದರು. ಚಿಯಾಂಗರ ನಾಯಕತ್ವದಲ್ಲಿ ಹೊಸ ಕೇಂದ್ರೀಯ ಸರ್ಕಾರ ನ್ಯಾನ್‍ಕಿಂಗ್‍ನಲ್ಲಿ ಸ್ಥಾಪಿತವಾಯಿತು. ಅದೇ ವರ್ಷ ಅವರು ಸೂಂಗ್ ಕುಟುಂಬದ ಕೊನೆಯ ಪುತ್ರಿ ಮೈ-ಲಿಂಗಳನ್ನು ವಿವಾಹವಾಗಿ, ಆ ಪ್ರಭಾವದಿಂದಾಗಿ ಕ್ರೈಸ್ತರಾದರು. ಆದರೂ ಕ್ರೈಸ್ತಮತಕ್ಕಿಂತ ಜಪಾನೀ ಹಾಗೂ ಲೆನಿನ್ ಪ್ರಭಾವವೇ ಅವರ ಮೇಲೆ ಹೆಚ್ಚಾಗಿತ್ತು.

	1931ರಲ್ಲಿ ಜಪಾನು ಮಂಚೂರಿಯವನ್ನು ಆಕ್ರಮಿಸಿತು. ಆ ದೇಶದೊಡನೆ ಯುದ್ಧ ಅನಿವಾರ್ಯವಾಯಿತು. ಆದರೆ ಕಮ್ಯೂನಿಸ್ಟರನ್ನು ಪರಾಜಯಗೊಳಿಸಿ ಅನಂತರ ಜಪಾನನ್ನು ಎದುರಿಸಬೇಕೆಂಬುದು ಚಿಯಾಂಗರ ಹಂಚಿಕೆಯಾಗಿತ್ತು. ಇದರಿಂದ ಆಂತರಿಕ ವಿರೋಧ ಬೆಳೆಯಲು ಅವಕಾಶ ನೀಡಿದಂತಾಯಿತು. ಧಾರ್ಮಿಕ ಐಕ್ಯ ಸಾಧಿಸುವ ಉದ್ದೇಶದಿಂದ ಅವರು ಕಾನ್‍ಫ್ಯೂಷಸನ ತತ್ತ್ವಗಳನ್ನು ಪ್ರಚಾರ ಮಾಡಿದರು.

	1936ರಲ್ಲಿ ಅಶಾಂತಿ ಹೆಚ್ಚಿತು. ಕಮ್ಯೂನಿಸ್ಟರೊಂದಿಗೆ ಒಪ್ಪಂದ ಮಾಡಿಕೊಂಡು ಜಪಾನೀ ಆಕ್ರಮಣದ ವಿಪತ್ತನ್ನು ಎದುರಿಸಲು ತೀರ್ಮಾನಿಸಲಾಯಿತು. ಚಿಯಾಂಗರ ನೇತೃತ್ವದಲ್ಲಿ ಎಲ್ಲ ಶಕ್ತಿಗಳೂ ಒಟ್ಟುಗೂಡಿದವು.

	1937ರಲ್ಲಿ ಜಪಾನಿನೊಂದಿಗೆ ಯುದ್ಧ ಆರಂಭವಾದಾಗ ಇಡೀ ಚೀನೀ ಪಡೆಗೆ ಚಿಯಾಂಗ್ ಮುಖ್ಯ ಸೇನಾನಿಯಾದರು. ಅನಂತರ 1941ರ ಡಿಸೆಂಬರ್ 8 ರಂದು ಇಟಲಿ ಮತ್ತು ಜರ್ಮನಿಗಳ ಮೇಲೆ ಚೀನ ಯುದ್ಧ ಘೋಷಿಸಿತು. 1942ರ ಆರಂಭದಲ್ಲಿ ಚಿಯಾಂಗ್ ಭಾರತಕ್ಕೆ ಭೇಟಿ ನೀಡಿ ಇಲ್ಲಿಯ ರಾಜಕೀಯ ಪರಿಸ್ಥಿತಿಯನ್ನವಲೋಕಿಸಿ, ಬ್ರಿಟಿಷರು ಭಾರತದ ಕಾಂಗ್ರೆಸ್ ನಾಯಕರೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕೆಂದು ಸಲಹೆ ಮಾಡಿದರು. ಭಾರತದ ಸಮಸ್ಯೆ ಪರಿಹರಿಸುವುದಕ್ಕೆ ಅಮೆರಿಕದ ಅಧ್ಯಕ್ಷರ ಮೂಲಕ ಬ್ರಿಟಿಷ್ ಪ್ರಧಾನಿಗೆ ಅನೇಕ ಸಲಹೆಗಳನ್ನು ನೀಡಿದರು. ಆದರೆ ಬ್ರಿಟಿಷ್ ಪ್ರಧಾನಿ ಚರ್ಚಿಲ್ ಅದಕ್ಕೆ ಗಮನ ಕೊಡಲಿಲ್ಲ.

	ಎರಡನೆಯ ಮಹಾಯುದ್ಧ ಕೊನೆಗೊಂಡಮೇಲೆ ಚೀನವೂ ವಿಶ್ವಸಂಸ್ಥೆಯಲ್ಲಿ ಐದು ಬೃಹದ್ರಾಷ್ಟ್ರಗಳಲ್ಲಿ ಒಂದೆಂಬ ಮನ್ನಣೆ ಪಡೆಯಿತು. 1948ರ ಮೇ 20ರಂದು ಚಿಯಾಂಗ್ ಚೀನದ ಪ್ರಥಮ ಸಂವಿಧಾನೀಯ ಅಧ್ಯಕ್ಷರಾಗಿ ಪ್ರತಿಜ್ಞಾವಚನ ಸ್ವೀಕರಿಸಿದರು. ಆದರೂ ಆಂತರಿಕವಾಗಿ ಚಿಯಾಂಗರ ಸರ್ಕಾರ ಕ್ಷೀಣಿಸಲಾರಂಭವಾಗಿ ಕಮ್ಯೂನಿಸ್ಟರೊಡನೆ ಹೋರಾಟ ಮುಂದುವರಿಯಿತು. 1949ರಲ್ಲಿ ಚೀನದ ಮುಖ್ಯ ಪ್ರದೇಶವನ್ನು ಕಮ್ಯೂನಿಸ್ಟರು ಸಂಪೂರ್ಣವಾಗಿ ಪಡೆದುಕೊಂಡರು. ಚಿಯಾಂಗ್ ಫಾರ್ಮೋಸ (ಟೈವಾನ್) ದ್ವೀಪದಲ್ಲಿ ನೆಲೆಸಿ, ಹೋರಾಟ ಮುಂದುವರಿಸಿದರು. ಚಿಯಾಂಗರು 1958ರಿಂದ ಮತ್ತು 1966ರಿಂದ 1972ರವರೆಗೆ ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದರು.

	ಚಿಯಾಂಗರ ಪತನಕ್ಕೆ ಅವರ ಸರ್ಕಾರದಲ್ಲಿ ತಾಂಡವವಾಡುತ್ತಿದ್ದ ಲಂಚರುಷುವತ್ತುಗಳೂ ಅವರು ಸಾರ್ವಜನಿಕ ಅಭಿಪ್ರಾಯವನ್ನು ಕಡೆಗಣಿಸಿದ್ದೂ ಬದಲಾದ ಪರಿಸ್ಥಿತಿಗೆ ತಕ್ಕಂತೆ ತಮ್ಮ ನೀತಿ ಮಾರ್ಪಡಿಸಿಕೊಳ್ಳದೆ ಹೋದ್ದೂ ಕಾರಣಗಳು. ಚಿಯಾಂಗ್ ದಕ್ಷತೆಗಿಂತ ನಿಷ್ಠೆಗೂ ಸಂಸ್ಥೆಗಿಂತ ವ್ಯಕ್ತಿಗೂ ಹೆಚ್ಚಿನ ಪ್ರಾಮುಖ್ಯ ನೀಡಿದರು. ಚಿಯಾಂಗ್ ಕೈ-ಷೆಕರನ್ನು ಚೀನೀ ಇತಿಹಾಸದ ಪರಿವರ್ತನೆಯ ಕಾಲದಲ್ಲಿ ಸಂಭವಿಸಿದ ಅನಿಶ್ಚಯತೆ ಅವ್ಯವಸ್ಥೆಗಳ ಪ್ರತೀಕವೆನ್ನಬಹುದು. ಇವರು 1975ರಲ್ಲಿ ಮರಣ ಹೊಂದಿದರು.             (ವಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ